ಯೋಗಾಚಾರ
	 ಕ್ರಿ.ಶ. 4ನೆಯ ಶತಮಾನದ ಸರಿಸುಮಾರಿನಲ್ಲಿ ಭಾರತದಲ್ಲಿ ಪ್ರವರ್ತಿತವಾದ ಬೌದ್ಧಮತ, ಇದರ ಪ್ರವರ್ತಕ ಅಸಂಗ. ಈತ ಯೋಗಾಚಾರ ಭೂಮಿ, ಯೋಗವಿಭಂಗಶಾಸ್ತ್ರ, ಅಭಿಸಮಯಾಲಂಕಾರ ಮುಂತಾದ ಪ್ರಮಾಣ ಗ್ರಂಥಗಳನ್ನು ಬರೆದ ಮೈತ್ರೇಯನಾಥನ ಶಿಷ್ಯ. ಈ ಗ್ರಂಥಗಳಿಗೆ ವ್ಯಾಖ್ಯಾನಗಳನ್ನು ಬರೆದು ಪ್ರಚಾರಮಾಡಿದರು. ಅಲ್ಲದೆ ಪಂಚಭೂಮಿ, ಅಭಿಧರ್ಮ ಸಮುಚ್ಚಯ, ಮಹಾಯಾನ ಸಂಗ್ರಹ ಎಂಬ ಮೂರು ಸ್ವತಂತ್ರ ಗ್ರಂಥಗಳನ್ನೂ ರಚಿಸಿದ್ದಾನೆ. ಈತ ಪುರುಷಪುರ (ಪೆಶಾವರ್) ವಾಸಿ. ಕೌಶಿಕಗೋತ್ರದ ಬ್ರಾಹ್ಮಣ ಮತಸ್ಥ. ಖ್ಯಾತ ದಾರ್ಶನಿಕ ವಸುಬಂಧು ಈತನ ಸೋದರನೆಂದು ತಿಳಿದುಬರುತ್ತದೆ. ಹಸುಬಂಧು ಬೌದ್ಧದೀಕ್ಷೆ ತೆಗೆದುಕೊಳ್ಳಲು ಅಸಂಗನೇ ಕಾರಣ ಎನ್ನಲಾಗಿದೆ. ಅಸಂಗ ಸರ್ವಾಸ್ತಿವಾದವನ್ನು ಮೆಚ್ಚಿಕೊಂಡವ. 539ರಲ್ಲಿ ಪರಮಾರ್ಥಭಿಕ್ಷು ಎಂಬಾತ ಅಸಂಗನ ಕೃತಿಗಳನ್ನು ಮಗಧದಿಂದ ಚೀನದೇಶಕ್ಕೆ ಕೊಂಡೊಯ್ದ. ಇವನೂ ಇತ್ಸಿಂಗನೂ ಅಸಂಗನ ಗ್ರಂಥಗಳನ್ನು ಚೀನಿ ಭಾಷೆಗೆ ಅನುವಾದ ಮಾಡಿದರು.

	ವ್ಯವದಾತಸಮಯ ಎಂದರೆ ಧರ್ಮವನ್ನು ಶುದ್ಧಿಮಾಡಿದವ ಎಂಬ ಪ್ರಶಸ್ತಿ ಹೊತ್ತಿದ್ದ ಅಸಂಗ ನಿರೂಪಿಸಿದ ಮತ ಬೋಧಿಸತ್ತ್ವಭೂಮಿ ಎಂಬ ಪ್ರಕರಣ ಗ್ರಂಥದಲ್ಲಿ ನಿರೂಪಿತವಾಗಿದೆ. ವಸುಬಂಧುವಿನ ವಿಂಶಿತಿಕಾ, ದಿಙನಾಗನ (ಸು. 345) ಪ್ರಮಾಣ ಸಮುಚ್ಚಯ, ಧರ್ಮಪಾಲನ ವಿಜ್ಞಾಪ್ತಿಮಾತ್ರತಾಸಿದ್ಧಿ (ಸು.630). ಧರ್ಮಕೀರ್ತಿಯ ಪ್ರಮಾಣವಾರ್ತಿಕ (ಸು.650) ಮುಂತಾದ ಗ್ರಂಥಗಳಲ್ಲಿ ಅಸಂಗನ ಯೋಗಾಚಾರ ವಿಜ್ಞಾನವಾದವನ್ನು ಸಮರ್ಥಿಸಲಾಗಿದೆ. ಯುವಾನ್ ಚಾಂಗ್ ಭಾರತಕ್ಕೆ ಬಂದಿದ್ದಾಗ ಈ ಸಂಪ್ರದಾಯಕ್ಕೆ ಸೇರಿದ ಶೀಲಭದ್ರ ನಾಲಂದಾ ವಿದ್ಯಾಲಯದ ಅಧಿಪತಿಯಾಗಿದ್ದ.

	ಯೋಗಾಚಾರನಾದವ ತನ್ನ ಯೋಗಕ್ರಿಯೆಯಿಂದ ಈ ಪ್ರಪಂಚ ವಿಜ್ಞಾನಮಯವೆಂದರಿತು ಮೂಲಭೂತವಾದ ಆಲಯ ವಿಜ್ಞಾನವೇ ಸತ್ಯವೆಂದು ಸಾಕ್ಷಾತ್ಕರಿಸಿಕೊಳ್ಳುವುದರಿಂದ ಈ ಪಂಥಕ್ಕೆ ಯೋಗಾಚಾರ ಅಥವಾ ಯೋಗಚರ್ಯಾಪಂಥ ಎಂಬ ಹೆಸರು ಬಂದಿತು. ಇಲ್ಲಿ ಆಲೋಚನ ತರಂಗಗಳಿಗಿಂತ ಅನುಭವವೇದ್ಯವಾಗುವುದು ಮುಖ್ಯವಿಚಾರ. ಜಿಜ್ಞಾಸೆ ಮುಖವಲ್ಲ; ಪ್ರಯೋಗ, ಅನುಶಾಸನ ಮುಖ್ಯ. ಧ್ಯಾನದ ಆಳದಿಂದ ರೂಪತಳೆದ ಸಿದ್ಧಾಂತವಿದು. ಪರಮಾಣು ನಿಜ, ಅವುಗಳ ಸಂಘಾತ ನಿಜ; ಆ ಸಂಘಾತದಿಂದ ಉಂಟಾದ ರೂಪಗಳು ನಿಜ ಎಂದು ಹೇಳುವ ವಾದವನ್ನು ಇವರು ನಿರಾಕರಿಸುತ್ತಾರೆ. ಪ್ರತ್ಯಕ್ಷಪ್ರಮಾಣವೂ ಇದನ್ನೆ ಪುಷ್ಟಿ ಮಾಡುತ್ತದೆ. ಕೇವಲ ವಿಜ್ಞಾನ (ವಿಜ್ಞಪ್ತಿಮಾತ್ರ) ಎನ್ನುವುದು ತರ್ಕದಿಂದ ಸ್ಪಷ್ಟವಾಗಲಾರದು. ಅದು ಮನಸ್ಸಿನ ವ್ಯಾಪ್ತಿಗೆ ಅಧೀನವಾದುದಲ್ಲ. ಅಚಿಂತ್ಯವಾದದ್ದು. ಇಡೀ ಜಗತ್ತಿಗೆ ಮೂಲಭೂತವಾಗಿ ಆಲಯವಿಜ್ಞಾನವಿದೆ. ಚಕ್ಷುಸ್ಸು, ಶ್ರೋತ್ರ, ಘ್ರಾಣ, ಜಿಹ್ವೆ, ಕಾಯ, ಮನಸ್ಸು ಎಂಬ ಪ್ರಸಿದ್ಧವಾದ ಆರು ವಿಜ್ಞಾನಗಳೊಂದಿಗೆ ಏಳನೆಯದಾದ ಮನೋವಿಜ್ಞಾನವನ್ನೂ ಎಂಟನೆಯದಾದ ಆಲಯ ವಿಜ್ಞಾನವನ್ನೂ ಯೋಗಾಚಾರವಾದಿಗಳು ಹೇಳುತ್ತಾರೆ. ಆಲಯವಿಜ್ಞಾನಕ್ಕೇ ಯೋಗಾಚಾರದವರು ಚಿತ್ತ ಎಂಬ ಪದ ಉಪಯೋಗಿಸುವುದು. ಉಳಿದ ಏಳು ವಿಜ್ಞಾನಗಳಿಗೆ ಪ್ರವೃತ್ತಿವಿಜ್ಞಾನವೆಂದು ಹೆಸರು. 

	ನಮಸ್ಕಾರ, ಸ್ಪರ್ಶ, ವೇದನಾ, ಸಂಜ್ಞಾ, ಚೇತನ-ಇವು ಚೈತ್ರಗಳೆನಿಸಕೊಳ್ಳುತ್ತವೆ (ಚಿತ್ತಧರ್ಮ). ಈ ಐದು ಸರ್ವಗ ಅಥವಾ ಸರ್ವ ಸಾಧಾರಣ ಚಿತ್ತಧರ್ಮಗಳು. ಛಂದ ಅಧಿಮೋಕ್ಷ, ಸ್ಮøತಿ, ಸಮಾಧಿ, ಮತಿ- ಇವು ವಿಶೇಷ ಚಿತ್ತಧರ್ಮಗಳು. ಹೀಗೆಯೇ ಕುಶಲ ಅಕುಶಲ, ಕ್ಲಿಷ್ಟ ಚಿತ್ತಧರ್ಮಗಳನ್ನು ಅವರು ನಿರೂಪಿಸುತ್ತಾರೆ. ಇವುಗಳಿಗೆಲ್ಲ ಆಕರವಾಗಿ ಆಲಯವಿಜ್ಞಾನವಿದೆ. ಸಮುದ್ರದ ಅಂಚಿನಲ್ಲಿ ಗಾಳಿಯಿಂದ ಎದ್ದು ಅಡಗುವ ಅಲೆಗಳು ವಿಜ್ಞಾನವೃತ್ತಿಗಳಾದರೆ ಧೀರಗಂಭೀರವಾದ ಸಮುದ್ರವೇ ಆಲಯ ವಿಜ್ಞಾನ. ಇದು ಲಂಕಾವತಾರ ಸೂತ್ರದ ವಿವರಣೆ. ಆರಂಭದಲ್ಲಿ ಅದರ ಸ್ಥಿತಿ ಅನಾವೃತ ಉಪೇಕ್ಷೆಯೆನಿಸಿಕೊಳ್ಳುತ್ತದೆ. ಆಲಯವಿಜ್ಞಾನವೆಂಬುದು ವಿಜ್ಞಾನಗಳ ಅವ್ಯಾಹತಸಂತತಿ, ಸಂಸಾರಸ್ರೋತಕ್ಕೆ ಇದು ಅಧಿಷ್ಠಾನ. ಉಪನಿಷತ್ತಿನ ಬ್ರಹ್ಮ, ಆತ್ಮ; ಸ್ಥವಿರವಾದದವರ ಭವಂಗ-ಸ್ರೋತ್ರ-ಇವು ಆಲಯವಿಜ್ಞಾನಕ್ಕೆ ಸಮವಾದ ಕಲ್ಪನೆಗಳೇ. ಇದೇ ಸರ್ವಾಸ್ತಿವಾದಿಗಳ ಈ ಕಲ್ಪನೆಯ ಕೊನೆಮುಟ್ಟಿದರು. ಕರ್ಮದ ಸಂತಾನ ಸಿದ್ಧವಾದರೆ, ಈ ಸಂತತಿಗೆ ಅಧಿಷ್ಠಾನ ಇರಬೇಕಲ್ಲವೆ, ಈ ಅಧಿಷ್ಠಾನವೇ ಆಲಯವಿಜ್ಞಾನ ಎಂದು ಯೋಗಾಚಾರರು ಹೇಳಿದರು. ಅಲ್ಲದೆ ಪ್ರತೀತ್ಯಸಮುತ್ಪಾದದ ಹೆಜ್ಜೆಗಳು ಭೂಮಿಯಿಲ್ಲದೆ ಹೇಗೆ ಉಳಿಯುವುವೆಂದು ಸರ್ವಾಸ್ತಿವಾದಿಗಳು ವಿವರಿಸಲಿಲ್ಲ; ಯೋಗಾಚಾರರು ಈ ಸಮಸ್ಯೆಯನ್ನು ಆಲಯವಿಜ್ಞಾನವೇ ಆ ಭೂಮಿಯೆಂದು ಹೇಳಿ ಬಿಡಿಸಿದರು. ಸರ್ವಾಸ್ತಿವಾದದಲ್ಲಿ ಧರ್ಮಗಳನ್ನು ಕುರಿತು ಮಾಡುವ ಅನುಚಿಂತನೆಯಿಂದ ಒದಗುವ ಪ್ರಜ್ಞೆಗೆ ಪ್ರಾಶಸ್ತ್ಯವುಂಟು. ಈ ಜಾಡನ್ನೇ ಯೋಗಾಚಾರದವರೂ ಹಿಡಿದು ಮುಂದೆ ಹೋದರು.

ಯೋಗಾಚಾರವಾದ ಸು. 1100ರಲ್ಲಿ ಭಾರತದಿಂದ ಮರೆಯಾಯಿತು. ಆದರೆ ಧರ್ಮಲಕ್ಷಣ ಎಂಬ ಯೋಗಾಚಾರ ಪ್ರಕರಣಗ್ರಂಥದ ಚೀನಿ ಅನುವಾದ ಫಹ್ಸಿ-ಯುಗ್ ಎಂಬ ಹೆಸರಿನಿಂದ ಚೀನದೇಶದಲ್ಲಿ ಪ್ರವೃತ್ತವಾಯಿತು. ಭಾರತಕ್ಕೆ ಬಂದಿದ್ದ ಚೀನಿಯಾತ್ರಿಕ ಯುವಾನ್‍ಚಾಂಗ್ (602-664), ಅವನ ಶಿಷ್ಯ ಕಉಎ-ಛಿ (632-682), ಪರಮಾರ್ಥ (500-564) ಮುಂತಾದವರು ಚೀನದಲ್ಲಿ ಯೋಗಾಚಾರಮತವನ್ನು ರೂಢಿಸಿದರು. ಜಪಾನಿನಲ್ಲಿ ಇದೇ ಯೋಗಾಚರಮತ ಹೊಸ್ಸೋ ಎಂಬ ಹೆಸರಿನಲ್ಲಿ ಪ್ರಚಲಿತವಾಯಿತು.

	ಯೋಗಾಚಾರದ ಪ್ರವರ್ತಕ ಅಸಂಗನ ಕಾಲದಿಂದ ಗುಹ್ಯತಂತ್ರವೊಂದು ಪ್ರಚಲಿತವಾಗಿ ಅವನ ಪರಂಪರೆಯಲ್ಲಿ ಧರ್ಮಕೀರ್ತಿಯವರೆಗೂ ಬಂದಿತೆಂದೂ ಯೋಗಾಚಾರವೇ ವಜ್ರಯಾನಕ್ಕೆ ಪೂರ್ವಭೂಮಿಯಾಯಿತೆಂದೂ ಟಿಬೆಟ್ ಧರ್ಮ ಇತಿಹಾಸ ಬರೆದ ಲಾಮಾ ತಾರಾನಾಥ ಹೇಳುತ್ತಾನೆ. ಈ ಸಂಪ್ರದಾಯದ ಸಾಧನಮಾಲಾ ಎಂಬ ತಾಂತ್ರಿಕ ಗ್ರಂಥದಲ್ಲಿ ಪ್ರಜ್ಞಾಪಾರಮಿತೆಗೆ ಅಂಕಿತವಾದ ಸಾಧನವೊಂದು ಅಸಂಗಕರ್ತೃಕವೆಂದು ತಿಳಿದುಬರುತ್ತದೆ. ಪಾರಮಿತಾನಯ, ಮಂತ್ರಾನಯಗಳಲ್ಲಿ ಯೋಗಾಚಾರದವರು ಮಂತ್ರಾನಯವನ್ನು ಅವಲಂಬಿಸುತ್ತಾರೆ. ಅಸಂಗನ ಮಹಾಯನನ ಸೂತ್ರಲಂಕಾರ ಎಂಬ ಗ್ರಂಥದಲ್ಲಿ ಈ ಮಂತ್ರಾಯನದ ಪ್ರಭಾವ ಕಾಣಿಸುತ್ತದೆ. ಮಂತ್ರಾಯನದಲ್ಲಿ ವಜ್ರಯಾನ, ಸಹಜಯಾನ, ಕಾಲಚಕ್ರ ಯಾನಗಳೆಂಬ ಪ್ರಭೇಧಗಳನ್ನು ಯೋಗಾಚಾರ ಸ್ಪಷ್ಟಗೊಳಿಸುತ್ತದೆ. ಮಂತ್ರಾನಯದ ಗುರಿ ವಜ್ರಸಿದ್ಧಿ ಪಡೆಯುವುದು. ಈ ಸಾಧನೆಯ ಫಲವಾಗಿ ಒಂದೊಂದು ಯೋಗದ ಆಚಾರದಿಂದಲೂ ಒಂದೊಂದು ವಜ್ರಸಿದ್ಧಿ ಒದಗುತ್ತದೆ. ಅನುಕ್ರಮವಾಗಿ ಕಾರ್ಯವಜ್ರಭಾವ, ವಾಗ್ವ್ರಜಭಾವ, ಚಿತ್ತವಜ್ರಭಾವ, ಜ್ಞಾನವಜ್ರಭಾವ, ಉಪಸಾಧನ, ಸಾಧನ, ಮಹಾಸಾಧನ, ಮಹೋಷ್ಠಿಷಬಿಂಬಭಾವನೆಯನ್ನು ಸೇವಾವಿಧಾನವೆಂದೂ ಅಮೃತಕುಂಡಲಿನಿಯ ಮೂಲಕ ಬಿಂಬಭಾವನೆಯನ್ನು ಪಡೆಯುವುದು ಉಪಸಾಧನವೆಂದೂ ದೇವತಾಬಿಂಬಭಾವನೆ ಸಾಧನವೆಂದೂ ವಿಭೂರೂಪದಲ್ಲಿ ಈ ಬಿಂಬವನ್ನು ಭಾವಿಸುವುದು ಮಹಾಸಾಧನೆಯೆಂದೂ ತಾತ್ಪರ್ಯ. ಪಾತಂಜಲಯೋಗ ಅಷ್ಟಾಂಗ ಯೋಗವಾದರೆ ಈ ಪಥದಲ್ಲಿ ಷಡಂಗಯೋಗ; ಪ್ರತ್ಯಾಹಾರ ಧ್ಯಾನ ಪ್ರಾಣಾಯಾಮ ಧಾರಣ, ಅನುಸ್ಮøತಿ, ಸಮಾಧಿ, ಚರಾಚರಪ್ರಪಂಚದಲ್ಲೆಲ್ಲ ಬುದ್ಧನನ್ನು ಭಾವಿಸಿಕೊಳ್ಳುವುದು ಭಾಧ್ಯಾನವೆನಿಸಿಕೊಳ್ಳುತ್ತದೆ. ಇವರೂ ಪ್ರಾಣಾಯಮವನ್ನು ಉಚ್ಛ್ವಾಸ ನಿಶ್ವಾಸ ನಿರೋಧವೆಂದು ಬಗೆದು ವಜ್ರಜಪವನ್ನು ಮಾಡುತ್ತಾರೆ. ಇಷ್ಟಮಂತ್ರ ಜಪಿಸಿ ಇಷ್ಟದೇವತೆಯನ್ನು ಭ್ರೂಮಧ್ಯೆ ನಿಲ್ಲಿಸಿ ಶ್ವಾಸಬಂಧನಮಾಡುವುದು ಧಾರಣೆ. ಸಂವೃತಿಸತ್ಯವನ್ನು ಮನದಟ್ಟುಮಾಡಿಕೊಳ್ಳುವುದು ಅನುಸ್ಮøತಿ. ಸಮಾಧಿಯಲ್ಲಿ ಮಹಾಜ್ಞಾನ ಒದಗುತ್ತದೆ. ಪ್ರಜ್ಞೋಪಾಯ ಸಮಾಪತ್ತಿಗಳಿಂದ ಎಲ್ಲಾ ಭಾವನೆಗಳನ್ನು ಏಕೀಭವಿಸಿ ಪಿಂಡಯೋಗದಿಂದ ಬಿಂಬಧಾರಣೆಮಾಡಿದರೆ ಈ ಮಹಾಜ್ಞಾನ ಒದಗುವುದೆಂದು ನಿರ್ವಚನವಿದೆ. ಈ ಮಹಾಜ್ಞಾನದ ಬಲದಿಂದ ಸಂವೃತಿ ಪರಮಾರ್ಥಸತ್ಯಗಳ ನಡುವೆ ಇರುವ ಭೇದಭಾವ ನಸಿಶಿಹೋಗಿ ಬುದ್ಧನ ಸಹಜ ಸ್ವರೂಪವಾದ ಅದ್ವೈತ ಸಿದ್ಧಿಸುತ್ತದೆ. ಇಲ್ಲಿ ಜ್ಞಾನಬಿಂಬ ಅಕ್ಷರವಾಗಿ ಉಳಿಯುತ್ತದೆ.

  	ಎಂಟನೆಯ ಶತಮಾನದಲ್ಲಿ ಶಾಂತರಕ್ಷಿತ ಬರೆದ ತತ್ತ್ವಸಂಗ್ರಹ ಎಂಬ ಗ್ರಂಥ ಸ್ವಾತಂತ್ರಿಕ ಯೋಗಾಚಾರ ಪಂಥವನ್ನು ಅನುಸರಿಸಿ ಬರೆದದ್ದು.
								 	  
     (ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ